1918 - . ಭಾರತದ ಪ್ರಸಿದ್ಧ ಭೂವಿಜ್ಞಾನಿ.  ಪೂರ್ಣ ಹೆಸರು  ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ.  ಇವರು ಜನಿಸಿದ್ದು ಬೆಂಗಳೂರಿನಲ್ಲಿ (30 ಏಪ್ರಿಲ್ 1918).  ತಂದೆ ಪುಟ್ಟಯ್ಯ, ಬೆಂಗಳೂರಿನಲ್ಲಿರುವ ಸರ್ಕಾರಿ ಮುದ್ರಣಾಲಯದ ನಿರ್ದೇಶಕರಾಗಿದ್ದವರು.

ರಾಧಾಕೃಷ್ಣ ಅವರ ಆರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು.  ಮುಂದೆ ಅಲ್ಲಿಯ ಸೆಂಟ್ರಲ್ ಕಾಲೇಜಿನಲ್ಲಿ ಭೂವಿಜ್ಞಾನವನ್ನು ಐಚ್ಛಿಕ ವಿಜ್ಞಾನವನ್ನಾಗಿ ಆಯ್ಕೆಮಾಡಿಕೊಂಡು ಬಿ.ಎಸ್.ಸಿ.(ಆನರ್ಸ್) ಪದವಿಯನ್ನು ಮೊದಲ ದರ್ಜೆಯಲ್ಲಿ ಗಳಿಸಿಕೊಂಡರು (1937).  ಜೊತೆಗೆ ಚಿನ್ನದ ಪದಕವನ್ನೂ ಪಡೆದರು.  ಅನಂತರ ತಮ್ಮ 19 ನೆಯ ವಯಸ್ಸಿನಲ್ಲಿ  ಆಗಿನ ಮೈಸೂರು ಭೂವಿಜ್ಞಾನ ಇಲಾಖೆಯಲ್ಲಿ (ಈಗಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ) ಭೂಸರ್ವೇಕ್ಷಣ ಸಹಾಯಕರಾಗಿ ಕೆಲಸಕ್ಕೆ ಸೇರಿದರು.  ಇದೇ ಇಲಾಖೆಯಲ್ಲಿ ಸತತವಾಗಿ 37 ವರ್ಷಗಳ ದೀರ್ಘಾವಧಿ ಸೇವೆಸಲ್ಲಿಸಿದರಲ್ಲದೆ ಕೊನೆಯ ಹತ್ತುವರ್ಷಗಳು ಆ ಇಲಾಖೆಯ ನಿರ್ದೇಶಕರಾಗಿಯೂ  ಕಾರ್ಯನಿರ್ವಹಿಸಿ 1974 ರಲ್ಲಿ ನಿವೃತ್ತರಾದರು.

ರಾಧಾಕೃಷ್ಣ ಅವರು ನಿರ್ದೇಶಕರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸರ್ವತೋಮುಖ ಬೆಳೆವಣಿಗೆಯನ್ನು ಕಂಡಿತು.  ರಾಜ್ಯದಲ್ಲಿ ಅಂತರ್ಜಲ ಸರ್ವೇಕ್ಷಣಾ ಘಟಕ ಮತ್ತು ಲಘು ಖನಿಜಾಭಿವೃದ್ಧಿ ಯೋಜನೆಗಳು  ಸ್ಥಾಪನೆಗೊಂಡವು (1966).  ಇವರ ಸೇವಾವಧಿಯಲ್ಲಿ ಇಂಗಳದಾಳ.  ಕಲ್ಯಾಡಿ ಮತ್ತು ತಿಂತಿಣಿಗಳಲ್ಲಿ ತಾಮ್ರದ ಗಣಿಗಳು ಪ್ರಾರಂಭವಾದುವು.   ಇವರು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ  ಉಪಕಛೇರಿಗಳನ್ನು ಸ್ಥಾಪಿಸಿ ಅಂತರ್ಜಲದ ಸರ್ವೇಕ್ಷಣೆಯನ್ನು ನಡೆಸಿದರಲ್ಲದೆ, ರಾಜ್ಯದ ಮೊತ್ತಮೊದಲ ಅಂತರ್ಜಲ ಭೂವೈಜ್ಞಾನಿಕ ನಕ್ಷೆಯನ್ನು ತಯಾರಿಸಿ ಪ್ರಕಟಿಸಿದರು.   ಇಲಾಖೆಯ ವಿವಿಧ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ಗಳಿಸುವಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎರಡನೆಯ ಸ್ಥಾನವನ್ನು ಪಡೆಯುವಂತೆ ಆ ಇಲಾಖೆಯನ್ನು ಅಭಿವೃದ್ಧಿ ಪಡಿಸಿದರು. ರಾಜ್ಯಭೂವಿಜ್ಞಾನ ಇಲಾಖೆಗಳಲ್ಲೆಲ್ಲ ಮೈಸೂರು ಭೂವಿಜ್ಞಾನ ಇಲಾಖೆ ಶ್ರೇಷ್ಠ ಇಲಾಖೆಯೆಂದು ಹೆಸರು ಪಡೆಯಲು ಇವರು ಕಾರಣರಾದರು.

ರಾಜ್ಯದ ಉದ್ದಗಲಕ್ಕೂ ಪ್ರಸರಿಸಿರುವ ವಿವಿಧ ಶಿಲಾಸಮುದಾಯಗಳನ್ನು ಮತ್ತು ಅವುಗಳಲ್ಲಿ ಹುದುಗಿರುವ ನಾನಾ ಬಗೆಯ ಖನಿಜಸಂಪತ್ತು ಮತ್ತು ರತ್ನಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ಮಾಡಿದ ಇವರು ಕ್ರಮಬದ್ಧ ಗಣಿಕಾರ್ಯಗಳನ್ನು ರೂಪಿಸಿದರು.  ಇದರ ಸಲುವಾಗಿ ಖನಿಜಾಭಿವೃದ್ಧಿ ಮಂಡಳಿ ಸಂಸ್ಥೆಯನ್ನು 1953ರಲ್ಲಿ ಪ್ರಾರಂಭಿಸಿದರು.  ಅದು ಈಗ ಮೈಸೂರು ಮಿನರಲ್ಸ್ ಲಿಮಿಟೆಡ್ ಎಂಬ ಹೆಸರಿನಿಂದ ಕಾರ್ಯಪ್ರವೃತ್ತವಾಗಿದೆ.  ಕಾಳಿ, ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣಾನದಿಗಳ ಅಣೆಕಟ್ಟುಗಳಿಗೆ ಸಂಬಂಧಿಸಿದಂತೆ ಇವರು ಸಲ್ಲಿಸಿದ ಭೂಸರ್ವೇಕ್ಷಣಾ ವರದಿಗಳು ಇಂದಿಗೂ ಅತ್ಯುತ್ತಮವೆನಿಸಿವೆ.

ರಾಧಾಕೃಷ್ಣ ಅವರ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಬಳಿಕ, ಕರ್ನಾಟಕ ಸರ್ಕಾರ ಇವರನ್ನು 1976ರಿಂದ 79ರ ತನಕ, ಕರ್ನಾಟಕ ತಾಮ್ರನಿಕ್ಷೇಪ ಒಕ್ಕೂಟ ಮತ್ತು ಭಾರತ ಚಿನ್ನದ ಗಣಿ ನಿಯಮಿತ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕಮಾಡಿತು.  ಇವರ ನಿರ್ದೇಶನದಲ್ಲಿ ಚಿತ್ರದುರ್ಗ ಜಿಲ್ಲೆಯ ಇಂಗಳದಾಳ  ಮತ್ತು ಹಾಸನ ಜಿಲ್ಲೆಯ ಕಲ್ಯಾಡಿ ತಾಮ್ರದ ಗಣಿಗಳ ಕಾರ್ಯಚಟುವಟಿಕೆಗಳು ಸಮಗ್ರ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆದು ಉತ್ಪಾದನಾ ಸಾಮಥ್ರ್ಯ ಅಧಿಕಗೊಂಡಿತು.  ಇಂಗಳದಾಳದಲ್ಲಿ ಲೋಹಸಂಸ್ಕರಣ ಘಟಕವೂ ಸ್ಥಾಪನೆಯಾಯಿತು.

ರಾಧಾಕೃಷ್ಣ ಅವರು 1966-71ರ ತನಕ ಭಾರತ ವ್ಯವಸಾಯೋತ್ಪನ್ನ ಹಣಕಾಸು ಅಭಿವೃದ್ಧಿ ಸಂಸ್ಥೆಯ ಕೋರಿಕೆ ಮೇರೆಗೆ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಗಳಲ್ಲಿ ಅಂತರ್ಜಲ ಲಭಿಸುವ ತಾಣ, ಜಲೋದ್ಧಾರಣಾ ವಿಧಾನ, ಬಳಸುವ ರೀತಿ ಮುಂತಾದವುಗಳ ಮೇಲೆ ಸಮೀಕ್ಷಾ ಕಾರ್ಯಗಳನ್ನು ನಡೆಸಿ, ವ್ಯವಸಾಯಕ್ಕೆ ಮತ್ತು ಗ್ರಾಮೀಣಪ್ರದೇಶಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಬಗ್ಗೆ ಶೋಧಾನಾಕಾರ್ಯವನ್ನು ನಡೆಸಿಕೊಟ್ಟರು.  ಹೀಗಾಗಿ ಇವರಿಗೆ ಅಂತರ್ಜಲ ಭಗೀರಥ ಎಂಬ ಬಿರುದೂ ಬಂತು.

ಇಲಾಖೆಯ ಕಾರ್ಯಕಲಾಪಗಳ ಜೊತೆಯಲ್ಲೇ ಇವರು ಭೂವಿಜ್ಞಾನ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ, ತಮ್ಮ ಸಂಶೋಧನಾ ಲೇಖನಗಳಿಂದ ಪ್ರಸಿದ್ಧಿ, ಪದವಿ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಈಗಿನ ರಾಮನಗರದಿಂದ (ಹಿಂದಿನ ಕ್ಲೋಸ್ಪೇಶಟೆ) ಮೊಳಕಾಲ್ಮೂರುವರೆಗೆ ಅನೂಚಾನವಾಗಿ ಹಬ್ಬಿರುವ ಕಣಶಿಲೆಗಳನ್ನು ಕುರಿತು ಸಿ. ಎಸ್. ಪಿಚ್ಚು ಮುತ್ತು ರವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ 1954ರಲ್ಲಿ ಪಿಎಚ್.ಡಿ. ಪದವಿ ನೀಡಿತು.  ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚಿವೆ.  ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹಬ್ಬಿರುವ ಆರ್ಷೇಯಕಲ್ಪದ ಶಿಲೆಗಳ ಜಟಿಲಸಮಸ್ಯೆಗಳನ್ನು ಸಮಂಜವಾಗಿ, ವೈಜ್ಞಾನಿಕವಾಗಿ ಹಾಗೂ ವಿಮರ್ಶಾತ್ಮಕವಾಗಿ ಸಂಶೋಧನೆ ಮಾಡಿರುವ  ಪ್ರತಿಭಾನ್ವಿತ ವ್ಯಕ್ತಿಗಳ ಪೈಕಿ ರಾಧಾಕೃಷ್ಣ ಅಗ್ರಗಣ್ಯರು. ಇವರ ಪ್ರತಿಭೆಯನ್ನು ಗೌರವಿಸಿ ಧನಬಾದ್ನಿ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಸಂಸ್ಥೆ 1992ರಲ್ಲಿ ಇವರಿಗೆ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ನೀಡಿ ಗೌರವಿಸಿತು. ಭಾರತ ಸರ್ಕಾರ ಇವರಿಗೆ 1971ರಲ್ಲಿ ರಾಷ್ಟ್ರೀಯ ಖನಿಜ ಪ್ರಶಸ್ತಿಯನ್ನು (ನ್ಯಾಷನಲ್ ಮಿನರಲ್ ಅವಾರ್ಡ್) ಮತ್ತು 1991ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.  ಇಂಡಿಯನ್ ನ್ಯಾಷನಲ್ ಅಕೆಡಮಿ ಆಫ್ ಸೈನ್ಸ್ ಸಂಸ್ಥೆ 1972ರಲ್ಲಿ ಇವರನ್ನು ತನ್ನ ಗೌರವ ಸದಸ್ಯರನ್ನಾಗಿ ಆರಿಸಿ ಗೌರವಿಸಿತು.  ಲಂಡನ್ನಿನ ಭೂವೈಜ್ಞಾನಿಕ ಸಂಘ 1986ರಲ್ಲೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ಭೂವೈಜ್ಞಾನಿಕ ಸಂಘ 1988ರಲ್ಲೂ ಇವರನ್ನು ತಮ್ಮ ತಮ್ಮ ಗೌರವ ಸದಸ್ಯರನ್ನಾಗಿ ಅಂಗೀಕರಿಸಿದವು.  ಕರ್ನಾಟಕ ಸರ್ಕಾರ 1974ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.  1990ರಲ್ಲಿ ಕಲ್ಕತ್ತದ ಏಷ್ಯಾಟಿಕ್ ಸೊಸೈಟಿ ಇವರಿಗೆ ಡಾ. ಪ್ರಮಥನಾಥ್ ಬೋಸ್ ಚಿನ್ನದಪದಕವನ್ನು ಕೊಟ್ಟು ಗೌರವಿಸಿತು. ನವದೆಹಲಿಯ ನ್ಯಾಷನಲ್ ಸೈನ್ಸ್ ಅಕೆಡಮಿ, 1993ರಲ್ಲಿ ಭೂವಿಜ್ಞಾನದಲ್ಲೇ ಅತಿಪ್ರತಿಷ್ಠಿತವಾದ ಡಿ. ಎನ್. ವಾಡಿಯ ಚಿನ್ನದ ಪದಕವನ್ನು ಇವರಿಗೆ ನೀಡಿ ಗೌರವಿಸಿದೆ.  ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರತಿಷ್ಠಿತ ಪ್ರಶಸ್ತಿಯೆನಿಸಿರುವ ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯೂ  ಇವರಿಗೆ ಸಂದಿದೆ.  ಕೆನಡದ ಖ್ಯಾತ ಭೂವಿಜ್ಞಾನಿ ಎ.ಡಿ. ಗ್ಲೆನ್ಕಿನ್ ಮತ್ತು ಸಹೋದ್ಯೋಗಿಗಳು 1985ರಲ್ಲಿ ಕರ್ನಾಟಕ ರಾಜ್ಯದ ಕೋಲಾರದ ಚಿನ್ನದಗಣಿ ಪ್ರದೇಶದಲ್ಲಿ ಸರ್ವೇಕ್ಷಣೆ ನಡೆಸಿ ಪತ್ತೆಮಾಡಿದ ಒಂದು ಹೊಸವರ್ಗದ ಸೀಸ-ಟಿಲ್ಯೂರಿಯಮ್ ಸಲ್ಫೈಡ್ ಖನಿಜಕ್ಕೆ ರಾಧಾಕೃಷ್ಣೈಟ್ ಎಂಬ ಹೆಸರಿಟ್ಟರು.

ಭಾರತ ಉಪಖಂಡದ ಭೂಇತಿಹಾಸದಲ್ಲಿ ಖನಿಜಸಂಪತ್ತಿನ ತವರುಮನೆ ಎನಿಸಿದ ಆರ್ಷೇಯಕಲ್ಪದ ಶಿಲಾಸಮೂಹಗಳ ಮೇಲೆ ರಾಧಾಕೃಷ್ಣ ಅವರು ಬರೆದ ಲೇಖನಗಳು ಪಾಶ್ಚಾತ್ಯ ಮತ್ತು ಪೌರಸ್ತ್ಯ ಭೂವಿಜ್ಞಾನಿಗಳ ಪ್ರಶಂಸೆಗೆ ಪಾತ್ರವಾಗಿವೆ.  ಇವರು ಯುನೈಟೆಡ್ ಕಿಂಗ್ಡಯಮ್ನ್ ಲ್ಯಾಕ್ಯಾನ್ಟ್ಗಳರ್ ಎಂಬಲ್ಲಿ ನ್ಯಾಟೋ ಸಂಸ್ಥೆಯ ಆಶ್ರಯದಲ್ಲಿ ನಡೆದ ಭೂಮಿಯ ಪೂರ್ವೇತಿಹಾಸವನ್ನು ಕುರಿತ  ಸಮ್ಮೇಳನದಲ್ಲಿ ಭಾಗವಹಿಸಿದ್ದರು (1975).  ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಉತ್ತರ ಕ್ಯಾರೊಲೀನ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಅಲ್ಲಿಗೆ ಆಗ್ನೇಯ ಏಷ್ಯದ ಭೂವಿಜ್ಞಾನ ಕುರಿತ ಸಮ್ಮೇಳನದಲ್ಲಿ ಭಾಗವಹಿಸಿ ಅನೇಕ ವಿದ್ವತ್ಪೂರ್ಣ ಭಾಷಣಗಳನ್ನು ನೀಡಿದರು.  ಭಾರತ ಮತ್ತು ರಷ್ಯದೇಶಗಳ ಸಂಯುಕ್ತ  ಆಶ್ರಯದಲ್ಲಿ ಹೈದರಾದಿನಲ್ಲಿರುವ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಷಟ್ಯೂಟ್ ಸಂಸ್ಥೆಯಲ್ಲಿ ನಡೆದ ಆರ್ಷೇಯ ಶಿಲಾವರ್ಗದ ಭೂರಾಸಾಯನ ಸಂಶೋಧನೆಗೆ ಸಂಬಂಧಿಸಿದ ಯೋಜನೆಯ ರೂವಾರಿಯಾಗಿ 1976-81ರತನಕ ಸೇವೆಸಲ್ಲಿಸಿದರು.  1982ರಲ್ಲಿ ಭಾರತ-ಕೆನಡಗಳ ಸಂಯುಕ್ತ  ಆಶ್ರಯದಲ್ಲಿ ನಡೆದ ದಕ್ಷಿಣ ಭಾರತದ ಪ್ರಾಗ್ಜೀವಿಶಿಲೆಗಳನ್ನು ಕುರಿತ ಕಾರ್ಯಾಗಾರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಅನೇಕ ವಿದ್ವದ್ಗೋಷ್ಠಿಗಳನ್ನು ನಡೆಸಿದರು.  1984ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಭಾರತ ಭೂವೈಜ್ಞಾನಿಕ ಸಂಘದ ವತಿಯಿಂದ ನಡೆದ ಸಭೆಯಲ್ಲಿ 'ಕ್ರಸ್ಟಲ್ ಎವೊಲ್ಯೂಷನ್ ಅಂಡ್ ಮೆಟಲರ್ಜಿ' ಎಂಬ ವಿಚಾರದ ಬಗ್ಗೆ ವಿಚಾರಪೂರಿತ ಭಾಷಣ ಮಾಡಿ ತಮ್ಮ ಸಂಶೋಧನಾನುಭವದ ಹರಹನ್ನು ಪ್ರದರ್ಶಿಸಿದರು.

ಭೂವಿಜ್ಞಾನಿಗಳನ್ನು ಸಂಘಟಿಸಿ ಭೂವಿಜ್ಞಾನವನ್ನು ಪ್ರಚುರಪಡಿಸುವಲ್ಲಿ ರಾಧಾಕೃಷ್ಣ ಅವರು ಮಾಡಿದ ಕೆಲಸ ಸ್ಮರಣೀಯವಾದುದು.  1950ಕ್ಕೂ ಮೊದಲೇ ಮೈಸೂರು ಭೂವಿಜ್ಞಾನಿಗಳ ಸಂಘವನ್ನು ಸ್ಥಾಪಿಸಿ,  ಅದರ ಕಾರ್ಯದರ್ಶಿಯಾಗಿ ಭೂವೈಜ್ಞಾನಿಕ ವಿಷಯಗಳ ಪ್ರಕಟಣೆಗಾಗಿ ಮಾಸಪತ್ರಿಕೆಯೊಂದನ್ನು ಆರಂಭಿಸಿದರು.  'ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯ' ಸಂಸ್ಥೆಯನ್ನು 1958ರಲ್ಲಿ ಪ್ರಾರಂಭಿಸಿ ಅದರ ಮೊದಲ ಕಾರ್ಯದರ್ಶಿಯಾಗಿ, ಭಾರತದಲ್ಲಿ ನಡೆಯುವ ಭೂವೈಜ್ಞಾನಿಕ ಸಂಶೋಧನೆಗಳನ್ನು ಪ್ರಪಂಚಾದ್ಯಂತ ಪ್ರಚುರಪಡಿಸಲು ಮತ್ತು ಇತರ ದೇಶಗಳಲ್ಲಿ ನಡೆದ ಸಂಶೋಧನೆಗಳನ್ನು ತಿಳಿಯಲು ನೆರವಾಗುವಂತೆ 'ಜರ್ನಲ್ ಆಫ್ ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯ' ಎಂಬ ತ್ರೈಮಾಸಿಕ ನಿಯತಕಾಲಿಕೆಯನ್ನು ಆರಂಭಿಸಿದರು.  ಅನಂತರ ಅದು ಮಾಸಪತ್ರಿಕೆಯಾಗಿ ಅಭಿವೃದ್ಧಿ ಹೊಂದಿತು.  ಭೂವಿಜ್ಞಾನ ವಿಷಯಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ರಾಜ್ಯಗಳ ಭೂವಿಜ್ಞಾನ, ಖನಿಜಸಂಪತ್ತು, ಭೂವಿನ್ಯಾಸ, ಭೂವೈಜ್ಞಾನಿಕ ಸರ್ವೇಕ್ಷಣ ಕೈಪಿಡಿ, ಅಂತರ್ಜಲ, ಆರ್ಥಿಕ ಭೂವಿಜ್ಞಾನ, ಭೂಕಂಪನ ಮುಂತಾದ ಅಮೂಲ್ಯ ವಿಷಯಗಳನ್ನು ಕುರಿತು ಅನೇಕ ಗ್ರಂಥಗಳನ್ನು ಈ ಸಂಸ್ಥೆ ಪ್ರಕಟಿಸಿದೆ.

ರಾಧಾಕೃಷ್ಣ ಅವರು ಕನ್ನಡದಲ್ಲೂ ಉತ್ತಮ ಬರೆಹಗಾರರು ಹಾಗೂ ವಾಗ್ಮಿಗಳಾಗಿದ್ದಾರೆ. ಇವರ ಮೊದಲಕನ್ನಡ ಕೃತಿ 'ನನ್ನ ತಂದೆ' ಎಂಬುದು ತಮ್ಮ ತಂದೆಯನ್ನು ಕುರಿತು ಬರೆದದ್ದು.  ಪ್ರಸಿದ್ಧ ವಿಜ್ಞಾನಿಗಳಾದ ಡಾರ್ವಿನ್, ಸಿ.ವಿ.ರಾಮನ್.  ಶ್ರೀನಿವಾಸ ರಾಮಾನುಜನ್, ಬಿ.ಜಿ.ಎಲ್. ಸ್ವಾಮಿ ಇವರನ್ನು ಕುರಿತ ಜೀವನ ಚರಿತ್ರೆಗಳನ್ನು ಕನ್ನಡದಲ್ಲಿ ಬರೆದಿದ್ದಾರೆ.  ಕರ್ನಾಟಕ ಸಾಹಿತ್ಯ ಅಕೆಡಮಿ 1989ರಲ್ಲಿ ಇವರ ರಾಮನ್ ಪುಸ್ತಕಕ್ಕೆ ಬಹುಮಾನ ನೀಡಿದೆ.  'ಅಂತರ್ಜಲ' ಎಂಬುದು ಭೂಜಲವಿಜ್ಞಾನದ ಮೇಲೆ ಬರೆದ ಒಂದು ಪುಸ್ತಕ.  ಭೂವಿಜ್ಞಾನಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಇವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಇವರಿಗೆ ಮೈಸೂರು ನಗರದ ದೇಜಗೌ ಟ್ರಸ್ಟ್ ವಿಶ್ವಮಾನದ ಪ್ರಶಸ್ತಿ ನೀಡಿ ಗೌರವಿಸಿದೆ (1997).  ಕರ್ನಾಟಕದ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿಯೂ ಇವರು ಸೇವೆಸಲ್ಲಿಸಿದ್ದಾರೆ.  ಇವರು ಸಂಪಾದಕರಾಗಿ ನಡೆಸುತ್ತಿದ್ದ ಕಾಮಕೋಟಿ ಪ್ರಭ ಎಂಬ ಮಾಸಪತ್ರಿಕೆ ತತ್ತ್ವಜ್ಞಾನದಲ್ಲಿ ಇವರಿಗಿರುವ ಪಾಂಡಿತ್ಯಕ್ಕೆ ಸಾಕ್ಷಿ. ಈಗ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.	
	 
(ಎಂ.ಜೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ